ಅಧಿಕಾರಕ್ಕೇರಿದ 10 ವಾರಗಳಲ್ಲೇ ಪ್ರಮುಖ ನಿರ್ಧಾರ ಕೈಗೊಂಡಿದ್ದು ಸರ್ಕಾರದ ಸಾಧನೆ : ಮೋದಿ

ನವದೆಹಲಿ, ಆ.15(ಪಿಟಿಐ)- ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೇವಲ ಹತ್ತುವಾರಗಳಲ್ಲಿ ನಾವು ಪ್ರಮುಖ ನಿರ್ಧಾರಗಳ ಮೂಲಕ ಸಾಧನೆ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ತ್ರಿವಳಿ ತಲಾಖ್ ನಿಷೇಧ ಕಾನೂನು ಅನುಷ್ಟಾನ ಮತ್ತು ಜಮ್ಮು-ಕಾಶ್ಮೀರವನ್ನು ಭಾರತೀಯ ಸಂವಿಧಾನದೊಂದಿಗೆ ಸೇರ್ಪಡೆ ಮಾಡುವಂತಹ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ.
ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಕೇಂದ್ರ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದು ಕೇವಲ 2ವಾರಗಳಲ್ಲಿ ಎಲ್ಲ ಜನರ ಆಶೋತ್ತರಗಳಿಗೆ ಸ್ಪಂದಿಸಲು ಕಾರ್ಯೋನ್ಮುಖವಾಯಿತು ಎಂದು ಹೇಳಿದರು. 2014ರಿಂದ 2019ರ ವರೆಗೆ ಜನರ ಅಗತ್ಯತೆಗಳನ್ನು ನಾವು ಈಡೇರಿಸಿದ್ದೇವೆ.
2019ರಿಂದ ಜನರ ಆಶೋತ್ತರಗಳು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ಪ್ರಧಾನಿ ತಿಳಿಸಿದರು. ಪ್ರವಾಹ ಸಂತ್ರಸ್ತರಿಗೆ ನೆರವು ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ ಸಂತ್ರಸ್ತರ ನೆರವಿಗಾಗಿ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಭಯ ನೀಡಿದರು.

Comments