ಸದ್ಯದಲ್ಲೇ ಜೆಡಿಎಸ್‍ಗೆ ಮತ್ತೊಂದು ಬಿಗ್ ಶಾಕ್ ಕೊಡಲು ಬಿಜೆಪಿ ತಯಾರಿ..!

ಬೆಂಗಳೂರು, ಆ.4- ಈಗಾಗಲೇ ಮೂವರು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿ ಜೆಡಿಎಸ್‍ಗೆ ಮತ್ತೊಂದು ಭಾರೀ ಶಾಕ್ ಕೊಡಲು ಸಜ್ಜಾಗಿದೆ. ಜೆಡಿಎಸ್‍ನ ಎಲ್ಲ 23 ಶಾಸಕರನ್ನು ಒಂದೇ ಬಂಚ್‍ನಲ್ಲಿ ಸೆಳೆಯಲು ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಎಲ್ಲ 23 ಶಾಸಕರನ್ನು ಬಿಜೆಪಿಗೆ ಕರೆದೊಯ್ಯಲು ಇಬ್ಬರು ಮಾಜಿ ಸಚಿವರೇ ಮುಂದಾಳತ್ವ ವಹಿಸಿದ್ದಾರೆ.
ಕುತೂಹಲಕಾರಿ ಅಂಶವೆಂದರೆ ಈ ತಂತ್ರಕ್ಕೆ ಕಾಂಗ್ರೆಸ್‍ನ ಕೆಲವರು ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಆಪರೇಷನ್ ಜೆಡಿಎಸ್ ಫಿನಿಷ್ ಕಾರ್ಯ ನಡೆದರೆ ಮುಂದಿನ ದಿನಗಳಲ್ಲಿ ಬಿಜೆಪಿ ವರ್ಸ್‍ಸ್ ಕಾಂಗ್ರೆಸ್ ಎಂಬ ಸಮೀಕರಣ ಅಸ್ತಿತ್ವಕ್ಕೆ ಬರಬೇಕೆಂದು ಈ ನಾಯಕರು ಕೈ ಜೋಡಿಸಲು ಕಾರಣ ಎಂದು ತಿಳಿದುಬಂದಿದೆ.
ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 17 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಅವರು ಅನರ್ಹಗೊಂಡು ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಕಾನೂನು ಹೋರಾಟದಲ್ಲಿ ಸಫಲರಾಗಿ ಉಪಚುನಾವಣೆಯಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ ಸರ್ಕಾರದ ಬಹುಮತಕ್ಕೆ ಮತ್ತೆ ಕಂಟಕವಾಗುವ ಸಾಧ್ಯತೆ ಇದೆ. ಮತ್ತೆ ಎದುರಾಗಬಹುದಾದ ಮಧ್ಯಂತರ ಚುನಾವಣೆ ತಪ್ಪಿಸಿಕೊಳ್ಳಲೋಸುಗ ಜೆಡಿಎಸ್‍ನ 23ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿಗೆ ಸೆಳೆಯುವ ತಂತ್ರ ಹೆಣೆಯಲಾಗಿದ್ದು, ಈ ಕುರಿತು ಮಾತುಕತೆಯನ್ನೂ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬಿಜೆಪಿ ಹಲವು ರಾಜ್ಯಗಳಲ್ಲಿ ಈ ಪ್ರಯೋಗ ಮಾಡಿ ಬೇರೆ ಪಕ್ಷಗಳಿಂದ ಶಾಸಕರನ್ನು ಸಾರಾಸಗಟಾಗಿ ತಮ್ಮತ್ತ ಸೆಳೆದು ಪಕ್ಷವನ್ನು ಅಧಿಕಾರದಲ್ಲಿ ಸ್ಥಾಪಿಸಿದೆ. ಕರ್ನಾಟಕದಲ್ಲೂ ಇದೇ ಪ್ರಯೋಗ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

Comments